ನ್ಯೂಜೆರ್ಸಿಯ ವರ್ಣಮಯ ನಗರವಾದ ಅಟ್ಲಾಂಟಿಕ್ ಸಿಟಿಯಲ್ಲಿ ಸೆಪ್ಟೆಂಬರ್ 2, 3, ಮತ್ತು 4, ರಂದು ನಡೆಯುವ ಒಂಭತ್ತನೆಯ ಅಕ್ಕ ವಿಶ್ವ ಕನ್ನಡ ಸಮ್ಮೇಳನಕ್ಕೆ ವಿಶ್ವದ ಎಲ್ಲ ಕನ್ನಡಿಗರಿಗೂ ಅಕ್ಕ ಕನ್ನಡ ಸಾಹಿತ್ಯ ಸಮಿತಿಯ ಪರವಾಗಿ ಆದರದ ಸ್ವಾಗತ.
[ultimatetables 44 /]
ಅನೇಕ ಹಿರಿಯ ಸಾಹಿತಿಗಳು, ಕವಿಗಳು ಕನ್ನಡಕ್ಕಾಗಿ ಸಲ್ಲಿಸಿರುವ ಸೇವೆಯನ್ನು ನೆನೆಯುವುದರ ಜೊತೆಗೆ, ಎಲೆಮರೆಯ ಕಾಯಿಯಂತಿರುವ ಅನೇಕ ಕವಿಗಳು, ಸಾಹಿತಿಗಳನ್ನು ಕನ್ನಡ ಲೋಕಕ್ಕೆ ಪರಿಚಯಿಸಲು ಈ ಕನ್ನಡ ಸಾಹಿತ್ಯದ ವೇದಿಕೆ ಸೃಷ್ಟಿಯಾಗಿದೆ. ಇದರ ಉಪಯೋಗವನ್ನು ಸಮಸ್ತ ಕನ್ನಡಿಗರೂ ಪಡೆದುಕೊಳ್ಳಬೇಕೆಂಬುದು ನಮ್ಮೆಲ್ಲರ ಹಂಬಲ.
ನಮ್ಮ ಸಾಹಿತ್ಯ ಸಮಿತಿಯ ವತಿಯಿಂದ ಸಮ್ಮೇಳನದ ಮೂರು ದಿನಗಳೂ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಸಮಸ್ತ ಕನ್ನಡಿಗರಿಗೂ ತಲುಪಿಸುವ ಸಂಕಲ್ಪ ಮಾಡಿದ್ದೇವೆ. ನಮ್ಮ ಸಾಹಿತ್ಯ ಸಮಿತಿಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪಟ್ಟಿ ಹೀಗಿವೆ.
1. ಸಾಹಿತ್ಯಾತಿತ್ಯ-ಕರ್ನಾಟಕದಿಂದ ಬರುವ ಇಬ್ಬರು ಜನಪ್ರಿಯ ಉದ್ದಾಮ ಸಾಹಿತಿಗಳಿಂದ ಭಾಷಣ, ಸಂವಾದ ಹಾಗೂ ಪುಸ್ತಕಗಳ ಬಿಡುಗಡೆ.
ಅಕ್ಕ ಸಾಹಿತ್ಯ ಸಮಿತಿಯು ವಿಶೇಷವಾದ ಪುಸ್ತಕವೊಂದನ್ನು ಅಂದರೆ ವಿಶ್ವದ ಹಲವೆಡೆಯಿಂದ ಹಲವು ಉತ್ತಮ ಬರಹಗಾರರನ್ನು ಗುರುತಿಸಿ, ನಾವು ಕೋರುವ ವಿಷಯಗಳಿಗೆ ಸಂಬಂಧಪಟ್ಟ ಕತೆ ಅಥವ ಬರಹಗಳನ್ನು ಅವರಿಂದ ಬರೆಸಿ, ಸಂಗ್ರಹಿಸಿ ಅದನ್ನು ಪುಸ್ತಕದ ರೂಪದಲ್ಲಿ ಹೊರತಂದು ನಮ್ಮ ಅತಿಥಿ ಸಾಹಿತಿಗಳಿಂದ ಬಿಡುಗಡೆ ಮಾಡಿಸುವುದು.
ವಿಶ್ವದ ಯಾವ ಮೂಲೆಯಲ್ಲಿದ್ದರೂ, ನೀವು ಬರೆದಿರುವ ಪುಸ್ತಕವನ್ನು ಒಬ್ಬ ಗೌರವಾನ್ವಿತ ಸಾಹಿತಿಗಳ ಅಮೃತ ಹಸ್ತದಿಂದ ಬಿಡುಗಡೆಮಾಡಿಸುವ ಕನಸಿದ್ದರೆ, ನಿಮ್ಮ ಪುಸ್ತಕವನ್ನು ನಮಗೆ ಸಕಾಲಕ್ಕೆ ತಲುಪಿಸಿದಲ್ಲಿ ನಿಮ್ಮ ಪುಸ್ತಕಗಳನ್ನೂ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿಸುತ್ತೇವೆ.
2. ಸ್ವಕೃತಿ ವಾಚನ: ನೀವು ರಚಿಸಿರುವ ಸಣ್ಣಕತೆ, ಕವನ, ಕವಿತೆಗಳನ್ನು ನಾವು ನೀಡುವ ಸಮಯದ ಅವಧಿಯಲ್ಲಿ ನೀವೇ ನಿಮ್ಮ ಕೃತಿಯನ್ನು ಸಭಿಕರಿಗೆ ವಾಚಿಸಿ ಅರ್ಪಿಸುವುದು ಹಾಗು ನಿಮ್ಮನ್ನು ನೀವು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿಕೊಳ್ಳುವ ಸುವರ್ಣಾವಕಾಶವನ್ನು ಕಲ್ಪಿಸಿಕೊಡುವುದು.
3. ಹರಟೆ ಕಟ್ಟೆ: ಇದೊಂದು ವಿಶೇಷ ಕಾರ್ಯಕ್ರಮ.
ಸೋಷಿಯಲ್ ಮೀಡಿಯಾ ವರವೋ? ಶಾಪವೋ?
ಅನುಕೂಲವೋ? ಅನಾನುಕೂಲವೋ?
ಉಪಕಾರವೋ? ಉಪಟಳವೋ?
ಇಷ್ಟವೋ? ಕಷ್ಟವೋ?
ನಾವೆಲ್ಲರೂ ನಮಗರಿವಿಲ್ಲದಂತೆ ಒಂದು ರೀತಿಯಲ್ಲಿ ಸೋಷಿಯಲ್ ಮೀಡಿಯಾಕ್ಕೆ ದಾಸರಾಗಿರುವ ಈ ಕಾಲದಲ್ಲಿ, ನಾವು ದಿನನಿತ್ಯ ಬಳಸುವ ಸೋಷಿಯಲ್ ಮೀಡಿಯಾವನ್ನು ಹತ್ತಿರದಿಂದ ಅವಲೋಕಿಸಿದರೆ ಹೇಗೆ? ಅದರಿಂದ ನಮಗಾಗುವ ಅನುಕೂಲಗಳು ಹೆಚ್ಚೋ ಅಥವಾ ಅನಾನುಕೂಲಗಳು ಹೆಚ್ಚೋ? ಸೋಷಿಯಲ್ ಮೀಡಿಯಾವನ್ನು ನಾವು ಹೇಗೆ ಬಳಸುತ್ತೇವೆ, ಹೇಗೆ ಬಳಸಬೇಕು ಎಂಬುದನ್ನು ಚರ್ಚಿಸುವುದು ಈ ಹರಟೆ ಕಟ್ಟೆಯ ಉದ್ದೇಶ. ಸೋಷಿಯಲ್ ಮೀಡಿಯಾದ ಉಪಕಾರ ಮತ್ತು ಉಪಟಳಗಳನ್ನು ಕುರಿತು ನಿಮ್ಮ ಮುಂದೆ ನಮ್ಮ ಅತಿಥಿಗಳು ಮುಖಾಮುಖಿ ಚರ್ಚಿಸಲಿದ್ದಾರೆ. ಬನ್ನಿ! ಈ ಜನಪ್ರಿಯ ಕಾರ್ಯಕ್ರಮವನ್ನು ತಪ್ಪದೇ ನೋಡಿ ಆನಂದಿಸಿ!
4. ಸಂಗೀತ ಸಾಹಿತ್ಯ ಸುಧೆ: ಈ ವಿಶೇಷ ಕಾರ್ಯಕ್ರಮ ಸ್ಥಳೀಯ ಗಾಯಕರಿಗೆಂದೇ ಸಜ್ಜಾಗಿರುವ ಒಂದು ವೇದಿಕೆ. ಈ ಕಾರ್ಯಕ್ರಮ ದ್ವಿಶೈಲಿಯ ಹಾಡುಗಾರಿಕೆ. ಅಂದರೆ ಜನಪದ ಹಾಗೂ ಭಾವಗೀತೆಗಳ ಸಮ್ಮಿಲನ. ಈ ಶೈಲಿಗಳಲ್ಲಿ ಭಾಷೆಯ ಬಳಕೆ ವಿಭಿನ್ನವಾಗಿದ್ದರೂ ಎರಡು ರೀತಿಯ ಹಾಡುಗಳಿಗೂ ಸಾಹಿತ್ಯದ ಪ್ರಾಮುಖ್ಯತೆ ಎಷ್ಟು ಮುಖ್ಯ ಎಂಬುದು.
ಈ ಕಾರ್ಯಕ್ರಮದಲ್ಲಿ ಆರು ಸ್ಥಳೀಯ ಗಾಯಕರನ್ನು ಗುರುತಿಸಿ ಅವರಿಂದ ಸಾಹಿತ್ಯ ಸಮಿತಿ ಆರಿಸಿದ ಹಲವು ಹಾಡುಗಳನ್ನು ಸಹಸ್ರಾರು ಕನ್ನಡಿಗರ ಸಮ್ಮುಖದಲ್ಲಿ ಹಾಡಿಸುವುದು. ವಿಶೇಷವೆಂದರೆ ಈ ಕಾರ್ಯಕ್ರಮವನ್ನು ಜಾನಪದ ಹಾಗೂ ಶಾಸ್ತ್ರೀಯ ಕ್ಷೇತ್ರಗಳಲ್ಲಿ ಆಳವಾಗಿ ಅಭ್ಯಸಿಸಿರುವ ಭಾರತದಿಂದ ಆಗಮಿಸುವ ಅತಿಥಿಗಳು ನಿರೂಪಿಸುವುದಲ್ಲದೆ ಗಾಯಕರ ಪ್ರತಿಹಾಡುಗಳಿಗೂ ವಿಶೇಷವಾದ ವಿವರಣೆಗಳನ್ನು ನೀಡುತ್ತಾರೆ.
5. ರಸ ಪ್ರಶ್ನೆ ಕಾರ್ಯಕ್ರಮ: ಕನ್ನಡ – ಕರ್ನಾಟಕದ ಬಗೆಗಿನ ಪಾಂಡಿತ್ಯವನ್ನು ಪ್ರದರ್ಶಿಸಲು ೨೦೧೬ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ Pureprayer.com Heritage Quiz ಸರಿಯಾದ ವೇದಿಕೆ! ರಸಪ್ರಶ್ನೆಯಲ್ಲಿ ಇತಿಹಾಸ, ಸಿನಿಮಾ, ಹಾಡು, ಸಾಹಿತ್ಯ.
ಮುಂತಾದ ಪ್ರಕಾರಗಳಿದ್ದು ಮನರಂಜಕವಾಗಿರುತ್ತದೆ. ಅಕ್ಕ ಸಾಹಿತ್ಯಿಕ ಸಮಿತಿಯವತಿಯಿಂದ ಜರುಗಲಿರುವ ಈ ಕಾರ್ಯಕ್ರಮವನ್ನು Pureprayer.com ಪ್ರಸ್ತುತ ಪಡಿಸಿರುತ್ತಾರೆ ಹಾಗು ಅತ್ಯಾಕರ್ಷಕ ಬಹುಮಾನಗಳನ್ನು ಕೊಡುತ್ತಾರೆ! ಪೂರ್ವ ಸಿದ್ಧತಾ ಹಂತದಲ್ಲಿ ವಿಜಯಿಗಳಾದ ಮೊದಲ ಆರು ಜೊತೆ ಭಾಗಿಗಳು ಸಮ್ಮೇಳನದಂದು ವೇದಿಕೆಯ ಮೇಲೆ ಅಂತಿಮ ಹಂತದಲ್ಲಿ ಭಾಗವಹಿಸುತ್ತಾರೆ. ಪೂರ್ವ ಸಿದ್ಧತಾ ಹಂತದ ವಿಜೇತರು ಸಮ್ಮೇಳನದಲ್ಲಿ ನಡೆಯುವ ಅಂತಿಮ ಹಂತವನ್ನು ಪ್ರವೇಶಿಸುತ್ತಾರೆ. ವೇದಿಕೆಯ ಮೇಲೆ ನಡೆಯುವ ಅಂತಿಮ ಹಂತ ಕನ್ನಡದಲ್ಲಿರುತ್ತದೆ.
6. ಸಾಮೂಹಿಕ ಪುಸ್ತಕ ಬಿಡುಗಡೆ: ಹವ್ಯಾಸಿ ಕವಿಗಳು ಮತ್ತು ಸಾಹಿತಿಗಳಿಗೆ ತಮ್ಮ ಕೃತಿಗಳನ್ನು ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡುವ ಅವಕಾಶ ಕೊಡುವ ಉದ್ದೇಶದಿಂದ ಅಕ್ಕ ಸಾಹಿತ್ಯಿಕ ಸಮಿತಿಯು ವಿಶ್ವಕನ್ನಡ ಸಮ್ಮೇಳನದ ಎರಡನೆಯ ದಿನ ಅಂದರೆ ಸೆಪ್ಟೆಂಬರ್ ೩ ರಂದು ಸಾಮೂಹಿಕ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮೆಲ್ಲರನ್ನೂ ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ನಿಯಮಗಳು:
೧. ಕೃತಿ ನಿಮ್ಮ ಸ್ವಂತದ್ದಾಗಿರಬೇಕು.
೨. ಕೃತಿ ಕನ್ನಡ ಮತ್ತು ಕನ್ನಡ ಸಂಸ್ಕೃತಿಗೆ ಸಂಬಂಧಿಸಿರಬೇಕು.
೩. ಕೃತಿ ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು.
ಆಯ್ಕೆಯಾದ ಪುಸ್ತಕಗಳನ್ನು ಅಕ್ಕ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಅತಿಥಿಗಳಿಂದ ಬಿಡುಗಡೆ ಮಾಡಿಸಲಾಗುವುದು.